‘ನಿಶ್ಯಕ್ತ’ ಪ್ರಧಾನಮಂತ್ರಿಗಳು ಕಡ್ಡಾಯವಾಗಿ ವಿಶ್ರಾಂತಿ ಪಡೆಯಲಿ!


ದೇಶದಲ್ಲಿ ಒಂದಾದಮೇಲೊಂದು ಮಹಾಹಗರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಡಾ.ಮನಮೋಹನ ಸಿಂಗ್ ಇವರು ವಿಶೇಷ ಪತ್ರಿಕಾಗೋಷ್ಠಿಯನ್ನು ಕರೆದರು. ಈ ಪತ್ರಿಕಾಗೋಷ್ಠಿ ಎಂದರೆ ‘ಈ ಮಹಾಹಗರಣಗಳಲ್ಲಿ ನನ್ನದೇನೂ ತಪ್ಪಿಲ್ಲ ಮತ್ತು ಕೇಂದ್ರ ಸರಕಾರದಲ್ಲಿ ಸಮ್ಮಿಶ್ರ ಸರಕಾರವಿರುವುದರಿಂದ ಭ್ರಷ್ಟಾಚಾರವನ್ನು ಹತ್ತಿಕ್ಕಲು ಏನೆಲ್ಲ ಅಡಚಣೆಗಳು ಬರುತ್ತವೆ’ ಎಂಬುದನ್ನು ಹೇಳಲು ಡಾ.ಸಿಂಗ್ ಇವರು ಮಾಡಿದ ಶತಪ್ರಯತ್ನವಾಗಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ, ಮಹಾಹಗರಣಗಳ ಮೇಲೆ ಮಹಾಹಗರಣಗಳು ಬೆಳಕಿಗೆ ಬರುತ್ತಿರುವಾಗ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕೇಂದ್ರಸರಕಾರವು ಏನಾದರೂ ಕಠೋರ ಕ್ರಮಕೈಗೊಳ್ಳುವ ಬಗ್ಗೆ ಯಾವುದೇ ತಯಾರಿಯು ಎಲ್ಲಿಯೂ ಕಂಡುಬರಲಿಲ್ಲ. ‘ಸಮ್ಮಿಶ್ರ ಸರಕಾರವನ್ನು ನಡೆಸುವುದೆಂದರೆ ಹೊಂದಿಕೊಂಡು ಹೋಗಲೇ ಬೇಕಾಗುತ್ತದೆ. ಸಮ್ಮಿಶ್ರ ಸರಕಾರದಲ್ಲಿ ನೀವು ವಿಚಾರವನ್ನು ಮಂಡಿಸಬಹುದು ಆದರೆ ಆಗ್ರಹಿಸುವಂತಿಲ್ಲ’ ಎನ್ನುತ್ತಾ ಡಾ.ಸಿಂಗ್ ಇವರು ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದರು. ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಮುಖಂಡರು ನಮ್ಮ ಆಡಳಿತವೇ ಸ್ಥಿರ ಸರಕಾರವನ್ನು ನೀಡಬಲ್ಲದು ಎಂದು ಡಂಗುರ ಸಾರುತ್ತಿರುವುದು ಕಾಣಿಸುತ್ತದೆ. ‘ತತ್ತ್ವಗಳಿಗೆ ತಿಲಾಂಜಲಿ ನೀಡಿ ಹಾಗೂ ಅಧಿಕಾರ ಉಳಿಸಿಕೊಳ್ಳಿ’ ಇದು ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಯಶಸ್ಸಿನ ಗುಟ್ಟಾಗಿದೆ ಎಂದು ಪತ್ರಿಕಾಗೋಷ್ಠಿಯಿಂದ ಹೊರಹೊಮ್ಮುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಮಿತ್ರಪಕ್ಷದ ಮಂತ್ರಿಗಳು ಎಷ್ಟು ಹಗರಣಗಳನ್ನು ಮಾಡಿದರೂ ಅವರ ಮೇಲೆ ಯಾವುದೇ ಕ್ರಮಕೈಗೊಳ್ಳುವಂತಿಲ್ಲ ಎಂಬುದು ಡಾ.ಸಿಂಗ್ ಇವರ ಹೇಳಿಕೆಯ ಸಾರವಾಗಿತ್ತು! ಡಾ.ಸಿಂಗ್ ಇವರು ಇಡೀ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳ ಬಿರುಸು ಬಾಣಗಳನ್ನು ಎದುರಿಸಿದರು. ಅವುಗಳಿಗೆ ಸಮರ್ಪಕ ಉತ್ತರವನ್ನು ನೀಡಿದರು ಎಂದೇನೂ ಆಗಲಿಲ್ಲ. ಈ ಪತ್ರಿಕಾಗೋಷ್ಠಿಯ ಮಾಧ್ಯಮದಿಂದ ಪ್ರಧಾನಮಂತ್ರಿಗಳಾದ ಡಾ.ಸಿಂಗ್ ಇವರ ‘ಅಸಹಾಯಕತೆ’ಯು? ಇನ್ನೊಮ್ಮೆ ಸ್ಪಷ್ಟವಾಗಿ ಕಂಡುಬಂದಿತು.
ತಮ್ಮ ಮುಖ ಮುಚ್ಚಿಕೊಳ್ಳಲು ಪ್ರಧಾನಮಂತ್ರಿಗಳು ಮಾಡಿದ ಆಕ್ರೋಶಪೂರ್ಣ ಯತ್ನ!
ಹಗರಣಗಳ ಬೆನ್ನಲ್ಲಿ ಡಾ.ಸಿಂಗ್ ಇವರ ರಾಜೀನಾಮೆಯ ಆಗ್ರಹವು ತೀವ್ರವಾಗುತ್ತಿದೆ. ಅದಕ್ಕೆ ಅವರು ‘ನೀವು ನನ್ನನ್ನು ಎಷ್ಟು ದೋಷಿಯೆಂದು ನಿರ್ಧರಿಸಿದ್ದೀರೋ, ಖಂಡಿತವಾಗಿಯೂ ನಾನಷ್ಟು ದೋಷಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆಯನ್ನು ಆಗ್ರಹಿಸಿದರೆ ಪ್ರತಿ ಆರು ತಿಂಗಳಿಗೊಮ್ಮೆ ಚುನಾವಣೆಯನ್ನು ನಡೆಸಬೇಕಾಗುವುದು’ ಎಂದರು. ಈ ಸಂದರ್ಭದಲ್ಲಿ ಡಾ.ಸಿಂಗ್ ಇವರು ಪತ್ರಿಕಾಗೋಷ್ಠಿಯಲ್ಲಿ ಜನತೆಯನ್ನು ಉದ್ದೇಶಿಸಿ, ‘ನಾಗರಿಕರೇ, ಪುನಃ ಪುನಃ ಚುನಾವಣೆಯನ್ನು ಮೇಲೆಳೆದುಕೊಳ್ಳದಿರಲು ಕೇಂದ್ರಸರಕಾರದ ಹಗರಣಗಳನ್ನು ಸುಮ್ಮನೇ ಸಹಿಸಿಕೊಳ್ಳಿ’ ಎಂದು ನೇರ ಸಂದೇಶ ನೀಡಿದರು. ಈ ಒಂದು ಹೇಳಿಕೆಯಿಂದಲೇ ಅವರಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಬಗೆಗಿನ ಅಸಂವೇದನಾಶೀಲತೆಯು ಎದ್ದು ಕಾಣಿಸುತ್ತದೆ. ೨೦೧೦-೧೧ನೇ ವರ್ಷದಲ್ಲಿ ದೇಶದ ಖರ್ಚು ೧೧.೮ ಲಕ್ಷ ಕೋಟಿ ರೂಪಾಯಿಯಷ್ಟಿದೆ ಹಾಗೂ ಹಗರಣದಿಂದ ನುಂಗಿದಂತಹ ಹಣ ೪.೮೨ಲಕ್ಷ ಕೋಟಿಯಷ್ಟು ಅಂದರೆ ದೇಶದ ಒಟ್ಟು ಖರ್ಚಿನ ಅರ್ಧಕ್ಕಿಂತ ಸ್ವಲ್ಪ ಕಡಿಮೆಯಿದೆ. ಪ್ರಧಾನಮಂತ್ರಿಗಳು ಕೇವಲ ಕೇಂದ್ರ ಸರಕಾರದ ಪ್ರಮುಖರಾಗಿರುವುದರ ಜೊತೆಗೆ ೧೦೦ಕೋಟಿ ಜನರ ನೇತೃತ್ವವನ್ನೂ ವಹಿಸಿದ್ದಾರೆ. ದೇಶದ ವಾರ್ಷಿಕ ಖರ್ಚಿನ ಅರ್ಧ ಭಾಗವನ್ನು ಮಹಾಹಗರಣಗಳು ಲೂಟಿ ಮಾಡಿರುವಾಗ ಅದರ ಜವಾಬ್ದಾರಿಯನ್ನು ಪ್ರಧಾನಮಂತ್ರಿಗಳು ಒಪ್ಪಿಕೊಳ್ಳದಿದ್ದರೆ ಇನ್ಯಾರು ಒಪ್ಪಿಕೊಳ್ಳಬೇಕು? ಡಾ.ಸಿಂಗ್ ಇವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಖ ಮುಚ್ಚಿಕೊಳ್ಳಲು ಮಾಡಿದ ಪ್ರಯತ್ನವು ಆಕ್ರೋಶವುಂಟು ಮಾಡುವಂತಿತ್ತು.
ಎಚ್ಚರಿಕೆ ನೀಡಿದ ಮಾತ್ರಕ್ಕೆ ಪ್ರಧಾನಿಯ ಕೆಲಸ ಮುಗಿಯಿತೇ?
‘೨ ಜಿ ಸ್ಪೆಕ್ಟ್ರಂ’ ಹಗರಣದ ಪ್ರಕರಣದಲ್ಲಿ ಕ್ರಿ.ಶ.೨೦೦೭ರಲ್ಲಿ ದೂರು ಬಂದ ನಂತರ ದೂರವಾಣಿ ಇಲಾಖೆಗೆ ಇದರ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ತಾಂತ್ರಿಕ ಹಾಗೂ ಕಾನೂನು ರೀತಿಯಲ್ಲಿ ಗಮನವಿಡಲು ಹೇಳಲಾಗಿತ್ತು ಎಂದೂ ಅವರು ಹೇಳಿದರು. ಪ್ರಧಾನಮಂತ್ರಿಗಳ ಜವಾಬ್ದಾರಿ ಕೇವಲ ಎಚ್ಚರಿಕೆ ನೀಡುವುದಕ್ಕಷ್ಟೇ ಸೀಮಿತವಾಗಿದೆಯೇ? ಪ್ರಧಾನಮಂತ್ರಿಗಳು ಕೇವಲ ಮೆರೆದಾಡುವುದಕ್ಕಷ್ಟೇ ಅಲ್ಲ; ಪಾಲನಕರ್ತರಾಗಿದ್ದಾರೆ. ಜನತೆಯ ಹಕ್ಕಿನ ತುತ್ತನ್ನು ಯಾರೋ ಕಸಿದುಕೊಂಡು ತನ್ನ ಹೊಟ್ಟೆಗೆ ಹಾಕುತ್ತಿದ್ದರೆ ಅವರನ್ನು ದಂಡಿಸುವ ಜವಾಬ್ದಾರಿ ಪ್ರಧಾನಮಂತ್ರಿಗಳದ್ದಾಗಿದೆ. ಆದರೆ ಡಾ. ಸಿಂಗ್ ಇವರು ನೀಡಿದಂತಹ ಉತ್ತರದಿಂದ ಅವರಿಗೆ ಈ ಅಧಿಕಾರದ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂದು ಯಾರಾದರೂ ತಿಳಿಸಿ ಹೇಳುವುದು ಆವಶ್ಯಕವಾಗಿದೆ ಎಂದು ಗಮನಕ್ಕೆ ಬಂದಿತು. ‘ಶಾಂತ ಹಾಗೂ ಮಿತಭಾಷಿ ಸ್ವಭಾವದ ಪ್ರಧಾನಮಂತ್ರಿಗಳು’ ಎಂದು ಕೇಂದ್ರಸರಕಾರವು ಅವರ ಪ್ರತಿಮೆಯನ್ನು ನಿರ್ಮಿಸಿತು. ಶಾಂತ ಅಥವಾ ಸಂಯಮಿಯಾಗಿರುವುದು ಅವಗುಣವಲ್ಲ. ಶಾಂತಿಯಿಂದ ಕ್ರಾಂತಿ ಮಾಡುವ ಅನೇಕ ವ್ಯಕ್ತಿತ್ವಗಳು ಭಾರತದಲ್ಲಿವೆ. ಆದರೆ ಡಾ.ಸಿಂಗ್ ಇವರ ಶಾಂತ ಸ್ವಭಾವವು ಅವರಲ್ಲಿಯ ದೌರ್ಬಲ್ಯ, ಅಸಹಾಯಕತೆ, ತತ್ತ್ವಹೀನತೆ ಹಾಗೂ ಸ್ವಾಭಿಮಾನಶೂನ್ಯತೆ ಈ ದೋಷದಿಂದ ತಯಾರಾಗಿದೆ ಎಂಬುದು ಇಲ್ಲಿ ಒತ್ತಿ ಹೇಳಬೇಕೇನಿಸುತ್ತದೆ. ಈ ದೋಷದ ತೀವ್ರತೆಯು ಎಷ್ಟಿದೆಯೆಂದರೆ ಅದರಿಂದ ಡಾ.ಸಿಂಗ್ ಇವರು ಬಹಳ ನಿಶ್ಯಕ್ತರಾಗಿದ್ದಾರೆ. ಈ ಮಹಾಕಾಯ ದೇಶದ ಆಡಳಿತವನ್ನು ನಡೆಸುವುದು ಅವರಂತಹ ‘ನಿಶ್ಯಕ್ತ’ ವ್ಯಕ್ತಿಗಳ ಕೆಲಸವಲ್ಲ. ಹಾಗಾಗಿ ಈಗ ಜನರೇ ಅವರಿಗೆ ವಿಶ್ರಾಂತಿಗಾಗಿ ಕಡ್ಡಾಯವಾಗಿ ಮನೆಗೆ ಕಳುಹಿಸಬೇಕು!

No comments:

Post a Comment