ಒಂದು ದೇವಮಂದಿರದ ಮೂಕ ರೋದನ (ಆಕ್ರೋಶ)

ನಾನು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಹಳ್ಳಿಮೂಲೆಯೊಂದರಲ್ಲಿ ಸುಮಾರು ೫೦ ವರ್ಷಗಳ ಹಿಂದೆ ಸರಕಾರೀ ಜಾಗದಲ್ಲಿ ರಚಿತವಾದ ಒಂದು ಹಿಂದೂ ದೇವಮಂದಿರ. ನನ್ನಲ್ಲಿ ಪ್ರತಿದಿನ ಮಂತ್ರ ಪಠಣ, ಪೂಜೆ, ಹೋಮ, ಹವನ, ಆರಾಧನೆ ನಡೆಯುತ್ತಿದ್ದು ಅಸಂಖ್ಯ ಭಕ್ತಾದಿಗಳ ಶ್ರದ್ಧಾಕೇಂದ್ರವಾಗಿದ್ದೇನೆ. ಹೀಗಿರುತ್ತ ನಾನು ರಸ್ತೆಯ ಬದಿಯಲ್ಲಿದ್ದೇನೆಂದು ಕರ್ನಾಟಕ ರಾಜ್ಯಸರಕಾರವು ನನ್ನನ್ನು ಧ್ವಂಸಗೊಳಿಸಲು ಸಕಲ ಸಿದ್ಧತೆ ನಡೆಸಿದೆಯಂತೆ.
ಸುಪ್ರಿಂಕೋರ್ಟ್ ನನ್ನಂತಹ ಸಾವಿರಾರು ದೇವಸ್ಥಾನಗಳನ್ನು ೩೧.೧೨.೨೦೧೦ ರೊಳಗೆ ಕೆಡವಲು ಆದೇಶಿಸಿದೆ ಎಂಬುದು ಅಧಿಕಾರಿಗಳ ಅಂಬೋಣ ! ಈಗಾಗಲೇ ಬಾಗಲಕೋಟೆ, ಬಿಜಾಪುರ, ಮೈಸೂರು, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ನನ್ನಂತಹ ನೂರಾರು ಸಾತ್ತ್ವಿಕ ವಾಸ್ತುಗಳು ಧ್ವಂಸವಾಗಿವೆ. ದೇವರ ಮೂರ್ತಿಗಳು ತುಂಡರಿಸಲ್ಪಟ್ಟು ಧರಾಶಾಯಿಯಾಗಿವೆ ! ಬೃಹತ್ ಗೋಪುರಗಳು ನೆಲಕಚ್ಚಿವೆ ! ಅಬ್ಬಬ್ಬಾ ನನ್ನ ಸರದಿ ಯಾವಾಗ ಬರುವುದೋ ಎಂದು ಭಯದಿಂದ ಥರಥರ ನಡುಗುತ್ತಿದ್ದೇನೆ. ಬಹುಶಃ ಇತ್ತೀಚೆಗಿನ ಚುನಾವಣೆಗಳು ಬಾರದಿರುತ್ತಿದ್ದರೆ ನಾನೆಂದೋ ಧ್ವಂಸವಾಗಲಿದ್ದೆನು !
ಇತ್ತೀಚೆಗೆ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ಕಟ್ಟುವ ಸಂಕಲ್ಪವನ್ನು ಯತಿವರೇಣ್ಯರು, ಹಿಂದೂಸಂಘಟನೆಗಳು ಸೇರಿ ಅಲ್ಲಲ್ಲಿ ಮಾಡಿವೆಯಂತೆ. ಇದೇ ಸಮಯದಲ್ಲಿ ಪೂಜ್ಯ ಯತಿವರೇಣ್ಯರುಗಳು ಧರಾಶಾಯಿಯಾಗಲಿರುವ ನನ್ನಂತಹ ಸಾವಿರಾರು ನತದೃಷ್ಟ ದೇವಮಂದಿರಗಳನ್ನು ಉಳಿಸುವ ಪ್ರಯತ್ನವನ್ನಾದರೂ ಮಾಡಬೇಕಿತ್ತಲ್ಲವೇ ? ಅವರನ್ನು ಭ್ರಷ್ಟ, ಜಾತ್ಯತೀತ ರಾಜಕಾರಣಿಗಳು ದಾರಿ ತಪ್ಪಿಸಿರಬೇಕು. ದಿನಾಂಕ ೩೧.೧೨.೨೦೧೦ ರೊಳಗಾಗಿ ನನ್ನಂತಹ ದೇವಮಂದಿರಗಳನ್ನು ಕೆಡವಬೇಕೆಂದು ಸುಪ್ರಿಂಕೋರ್ಟ್‌ನಲ್ಲೂ ಹೇಳಿಲ್ಲ. ಬದಲಾಗಿ ಇಡೀ ದೇಶದಲ್ಲಿ ಕರ್ನಾಟಕ ಸರಕಾರವೊಂದೇ ಆ ದಿನಾಂಕದೊಳಗಾಗಿ ದೇವಮಂದಿರಗಳನ್ನು ಕೆಡವುತ್ತೇವೆಂದು ಸುಪ್ರಿಂಕೋರ್ಟಿಗೆ ಅಫಿದಾವಿತು ಕೊಟ್ಟಿತ್ತು. ರಾಜ್ಯ ಸರಕಾರಕ್ಕೆ ಇಂತಹ ಬುದ್ಧಿ(ದುರ್ಬುದ್ಧಿ)ಯಾದರೂ ಏಕೆ ಬಂತೋ ತಿಳಿಯದು. ನಮ್ಮ ರಾಜ್ಯದಲ್ಲಿನ ಅಸಂಖ್ಯ ಯತಿವರೇಣ್ಯರು ಏಕೆ ಸುಮ್ಮನಿದ್ದೀರಿ ? ಈಗಲಾದರೂ ರಾಜ್ಯಸರಕಾರಕ್ಕೆ ಬುದ್ಧಿಹೇಳಿ, ನನ್ನಂತಹ ನಿರಪೇಕ್ಷಕರ ಅಸಂಖ್ಯ ದೇವಮಂದಿರಗಳ ರಕ್ಷಣೆಗೆ ಮುಂದಾಗಲಾರಿರಾ ? ಧರ್ಮ ಉಳಿಯದೆ, ನಾವು ಉಳಿಯದೆ, ತಾವು ಉಳಿಯಬಲ್ಲಿರಾ ? ದಯವಿಟ್ಟು ಯೋಚಿಸಿರಿ.
        ತಮ್ಮ ವಿನಮ್ರ
        ಒಂದು ಭಯಭೀತ ಹಿಂದೂ ದೇವ ಮಂದಿರ
ರೋದನ ಕೇಳಿಸಿಕೊಂಡವರು : ಬಿ. ರಾಮ ಭಟ್ (ನಿವೃತ್ತ ಉಪತಹಶೀಲ್ದಾರರು, ಪ್ರಸಾದ ನಿಲಯ, ಮೆಸ್ಕಾಂ ಬಳಿ, ಸುಳ್ಯ.)

No comments:

Post a Comment