ಕೊಳ್ಳೆಗಾಲದಲ್ಲಿ ಸರಕಾರವು ಅನಧಿಕೃತವೆಂದು ಘೋಷಿಸಿ ದೇವಸ್ಥಾನಗಳನ್ನು ತೆರವುಗೊಳಿಸುವ ಕಾರ್ಯದ ವಿರುದ್ಧ ಪ್ರತಿಭಟನೆ
೬೦೦ ಜನ ಹಿಂದೂ ಧರ್ಮಾಭಿಮಾನಿಗಳ ಉಪಸ್ಥಿತಿ
ಕೊಳ್ಳೆಗಾಲ (ಚಾಮರಾಜನಗರ): ಕರ್ನಾಟಕ ಸರಕಾರವು ರಾಜ್ಯದಲ್ಲಿನ ಹಲವಾರು ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುತ್ತಿರುವುದನ್ನು ವಿರೋಧಿಸಿ ಚಾಮರಾಜ ನಗರದ ಕೊಳ್ಳೆಗಾಲದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಯಿತು. ನಗರದ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿನ ಧರ್ಮಾಭಿಮಾನಿಗಳು, ವಿವಿಧ ದೇವಸ್ಥಾನಗಳ ಭಕ್ತಾದಿಗಳೂ ಸೇರಿದಂತೆ ೬೦೦ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗ್ರಾಮದೇವತೆ ಯಾದ ಮಾಳಿಗೆ ಮಾರಿಯಮ್ಮನ ದೇವಸ್ಥಾನದ ಎದುರು, ದೇವಸ್ಥಾನದ ಅರ್ಚಕರು ಮಾಡಿದ ಧರ್ಮಧ್ವಜದ ಪೂಜೆಯಿಂದ ಮೆರವಣಿಗೆಯು ಪ್ರಾರಂಭವಾಯಿತು. ಗ್ರಾಮೀಣ ಬಸ್ ನಿಲ್ದಾಣದ ಬಳಿ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಮೆರವಣಿಗೆಯಲ್ಲಿ ಸೇರಿಕೊಂಡರು. ಮೆರವಣಿಗೆಯು ನಗರಸಭಾ ಕಾರ್ಯಾಲಯದ ಬಳಿ ತಲುಪಿದಾಗ ಪೌರಾಯುಕ್ತರು ಕಾರ್ಯಾಲಯದಲ್ಲಿ ಇರಲಿಲ್ಲದ್ದರಿಂದ ಅವರು ಬರುವವರೆಗೆ ಪ್ರತಿಭಟನಕಾರರು ಅಲ್ಲಿಯೇ ಧರಣಿ ಕುಳಿತರು. ನಂತರ ಪೌರಾಯುಕ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಎಲ್ಲ ಧರ್ಮಾಭಿಮಾನಿಗಳ ವತಿಯಿದ ಮನವಿಯನ್ನು ಸಲ್ಲಿಸಲಾಯಿತು. ನಂತರ ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರರಿಗೆ ಮನವಿಯನ್ನು ನೀಡಿ ಅವರಲ್ಲಿ ‘ತಪ್ಪನ್ನು ಸ್ವೀಕರಿಸುವುದು ಸಾಲದು, ನಮಗೆ ಈ ಬಗ್ಗೆ ಸರಕಾರ ಯಾವ ಕ್ರಮವನ್ನು ಕೈಗೊಳ್ಳಲಿದೆ ಎನ್ನುವ ಮಾಹಿತಿ ಬೇಕು’ ಎಂದು ಅವರು ಆಗ್ರಹಿಸಿದರು. ಆಗ ಶಿರಸ್ತೇದಾರರು ‘ಜಿಲ್ಲಾ ಮಟ್ಟದಲ್ಲಿ ಈ ವಿಷಯಕ್ಕಾಗಿ ನಿರ್ಮಿಸಲ್ಪಟ್ಟಿರುವ ಕಮಿಟಿಯ ಎದುರು ನಾನು ಈ ವಿಷಯವನ್ನು ವಿಸ್ತೃತವಾಗಿ ಮಂಡಿಸುವೆನು. ದೇವಸ್ಥಾನಕ್ಕೆ ನೋಟಿಸ್ ಬಂದ ಮಾತ್ರಕ್ಕೆ ಅದನ್ನು ತೆರವು ಗೊಳಿಸಲಾಗುವುದು ಎಂಬ ಭಯದಲ್ಲಿರಬೇಡಿ’ ಎಂಬ ಭರವಸೆಯನ್ನು ನೆರೆದ ಧರ್ಮಾಭಿಮಾನಿಗಳಿಗೆ ನೀಡಿದರು.
No comments:
Post a Comment