ಈಗಲೂ ಮುಂದುವರಿಯುತ್ತಿರುವ
ಪೊಲೀಸರಿಂದ ಸನಾತನದ ತನಿಖೆಯ ಸರಣಿ !
ಒಂದು ರಾಜ್ಯದಲ್ಲಿನ ಸನಾತನದ ಸಾಧಕರನ್ನು ರಾಷ್ಟ್ರೀಯ ತನಿಖಾ ದಳದ ಇಬ್ಬರು ಅಧಿಕಾರಿಗಳು ವಿಚಾರಣೆ ಮಾಡಿದರು. ಈ ಅಧಿಕಾರಿಗಳು ಸನಾತನದ ಸಾಧಕರಿರುವ ವಾಸ್ತುವಿನ ಪರಿಸರಕ್ಕೆ ಬಂದ ತಕ್ಷಣ ಅಲ್ಲಿನ ಸಾಧಕರೊಬ್ಬರು ಅವರನ್ನು ಭೇಟಿಯಾಗಲು ಹೊರಗೆ ಬಂದರು. ಆರಂಭದಲ್ಲಿ ಹಸ್ತಲಾಘವಕ್ಕೆ ಕೈಯನ್ನು ಮುಂದೆ ಮಾಡಿ ಬಳಿಕ ‘ಓ ನೀವು ಹಸ್ತಲಾಘವ ಮಾಡುವುದಿಲ್ಲ’ ಎನ್ನುತ್ತಾ ಸಾಧಕನಿಗೆ ‘ನಮಸ್ಕಾರ’ ಎಂದರು. ಅನಂತರ ಸಾಧಕ ಹಾಗೂ ಅಧಿಕಾರಿಗಳ ನಡುವೆ ಮುಂದಿನ ಸಂಭಾಷಣೆ ಆಯಿತು.ಅಧಿಕಾರಿ: ನಾನು ಕಳೆದ ಸಲ ಬಂದಿದ್ದೆನು. ಆಗ ನಿಮ್ಮನ್ನು ನೋಡಿರಲಿಲ್ಲ.
ಸಾಧಕ: ನಾನು ಹೊರಗೆ ಹೋಗಿದ್ದೆನು.
ಅಧಿಕಾರಿ: ನಿಮ್ಮ ಹೆಸರೇನು? ಎಷ್ಟು ವರ್ಷದಿಂದ ಇಲ್ಲಿದ್ದೀರಿ. (ಸಾಧಕನು ಹೆಸರು ಮತ್ತು ಇತರ ಮಾಹಿತಿಗಳನ್ನು ಹೇಳಿದನು.)
ಅಧಿಕಾರಿ: ಇಲ್ಲಿನ ಖರ್ಚನ್ನು ಹೇಗೆ ನಿಭಾಯಿಸುತ್ತೀರಿ?
ಸಾಧಕ: ಗುರುಪೂರ್ಣಿಮೆಯ ಸಂದರ್ಭದಲ್ಲಿ ಅರ್ಪಣೆ ಸಂಗ್ರಹಿಸಿ ಅದರಿಂದ ಖರ್ಚು ಮಾಡುತ್ತೇವೆ.
ಅಧಿಕಾರಿ: ಜನರು ಕೊಡುವ ೫-೧೦ರೂಪಾಯಿಗಳಿಂದ ಇಷ್ಟು ದೊಡ್ಡ ಕಾರುಬಾರನ್ನು ಹೇಗೆ ನಡೆಸುತ್ತೀರಿ?
ಸಾಧಕ: ಸಾರ್ವಜನಿಕರಿಂದ ಬೇಳೆ ಕಾಳು, ಅಕ್ಕಿ ಇತ್ಯಾದಿ ವಸ್ತುಗಳು ಸಹ ಅರ್ಪಣೆ ಬರುತ್ತವೆ.
ಅಧಿಕಾರಿ: ಆದರೂ ಅದರಿಂದ ಹೇಗೆ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೇ ನೀವು ಮಾನಧನ ಸಹ ಕೊಡುತ್ತೀರಿ. ಇಷ್ಟು ಕಡಿಮೆ ಮೊತ್ತದಲ್ಲಿ ಸಾಧಕರು ಜೀವನ ನಡೆಸಲು ಸಾಧ್ಯವಿದೆಯೇ? ಗೋವಾದಿಂದ ನಿಮಗೆ ಹಣ ಏನಾದರೂ ಕಳುಹಿಸುತ್ತಾರೆಯೇ? ನನಗೆ ೫೦,೦೦೦ ರೂಪಾಯಿ ಸಂಬಳ ಬರುತ್ತದೆ. ಆದರೂ ತಿಂಗಳ ಕೊನೆಯಾಗುವಾಗ ಬಹಳ ಕಷ್ಟವಾಗುತ್ತದೆ. ಹೀಗಿರುವಾಗ ನೀವು ಹೇಗೆ ನಿಭಾಯಿ ಸುತ್ತೀರಿ? ನೀವು ನಿಮ್ಮ ಮಕ್ಕಳ ಜೊತೆಯಲ್ಲಿ ಏಕೆ ವಾಸಿಸುವುದಿಲ್ಲ? ಅವರು ನಿಮ್ಮನ್ನು ಕಾಣಲು ಬರುತ್ತಾರೆಯೇ?
ಸಾಧಕ: ಮಕ್ಕಳು ತಮ್ಮಷ್ಟಕ್ಕೆ ಜೀವನ ನಡೆಸುತ್ತಿದ್ದಾರೆ. ನಾನು ಸಾಧನೆ ಮಾಡುವುದಕ್ಕಾಗಿ ಇಲ್ಲಿ ಬಂದಿದ್ದೇನೆ. ಆಗಾಗ ಮಕ್ಕಳನ್ನು ನೋಡಿ ಬರುತ್ತೇನೆ.
(ಅಧಿಕಾರಿಯು ಓರ್ವ ಸಾಧಕನ ಬಗ್ಗೆ ವಿಚಾರಿಸಿದರು.)
ಅಧಿಕಾರಿ: ಆ ಸಾಧಕನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದೆಯೇ? ಅವರಿಂದ ದೂರವಾಣಿ ಕರೆ ಬಂದಿದೆಯೇ ಅಥವಾ ನೀವು ಅವರಿಗೆ ದೂರವಾಣಿ ಕರೆ ಮಾಡುತ್ತಿರೇನು? ಅವರ ಪತ್ನಿ ಹಾಗೂ ಮಗ ಎಲ್ಲಿದ್ದಾರೆಂದು ಗೊತ್ತಿದೆಯೇ?
ಸಾಧಕ: ಆ ಬಗ್ಗೆ ಗೊತಿಲ್ಲ.
ಅಧಿಕಾರಿ: ಆ ಸಾಧಕನ ಬಗ್ಗೆ ಏನಾದರೂ ಗೊತ್ತಿದ್ದರೆ ಹೇಳಿದರೆ ತುಂಬಾ ಒಳ್ಳೆಯದಿತ್ತು. ನಮ್ಮ ಜಂಜಾಟ ಹಾಗೂ ನಿಮಗಾಗುವ ತೊಂದರೆಯೂ ದೂರವಾಗುತ್ತದೆ. ನೀವಲ್ಲದೇ ಅವರಿಗೆ ಆತ್ಮೀಯರಾದವರು ಯಾರಾದರೂ ಇದ್ದಲ್ಲಿ ಅವರ ಮೂಲಕ ದೂರವಾಣಿ ಕರೆ ಅಥವಾ ಸಂದೇಶ ನೀಡಿ ಅವರನ್ನು ಶರಣಾಗಲು ಹೇಳಿರಿ.
ಸಾಧಕ: ನಮಗೆ ಅದರ ಬಗ್ಗೆ ಏನೂ ತಿಳಿದಿಲ್ಲ.
ಅಧಿಕಾರಿ: ಈಗ ಇಲ್ಲಿ ಎಷ್ಟು ಮಂದಿ ಇದ್ದಾರೆ.
(ಸಾಧಕನು ಮಾಹಿತಿಯನ್ನು ನೀಡಿದನು.)
ಅಧಿಕಾರಿ: ನಾವು ಕಳೆದ ವರ್ಷ ಇಲ್ಲಿಗೆ ಬಂದಾಗ ಇಲ್ಲಿ ತುಂಬಾ ಜನರಿದ್ದರು. ಈಗ ಅವರೆಲ್ಲ ಎಲ್ಲಿಗೆ ಹೋದರು?
ಸಾಧಕ: ಅವರೆಲ್ಲರೂ ಮನೆಗೆ ಹೋಗಿದ್ದಾರೆ.
ಅಧಿಕಾರಿ: ಕಾರಣವೇನು?
ಸಾಧಕ: ಪೊಲೀಸು ಅಧಿಕಾರಿಗಳು ಹಾಗೂ ನಿಮ್ಮಂತಹವರು ಆಗಾಗ್ಗೆ ಬಂದು ಹೋಗುತ್ತಿರುವುದರಿಂದ ಹೆದರಿ ಕೆಲವರು ಇಲ್ಲಿಗೆ ಈಗ ಬರುತ್ತಿಲ್ಲ.
ಅಧಿಕಾರಿ: ಹೌದು. ಅದು ಸಹಜವೇ ಆಗಿದೆ.
(ಅಷ್ಟರಲ್ಲಿ ಇನ್ನೋರ್ವ ಸಾಧಕರು ಅಲ್ಲಿಗೆ ಬಂದರು. ಆ ಸಾಧಕರಿಗೆ ಓರ್ವ ಸಾಧಕರ ಬಗ್ಗೆ ವಿಚಾರಿಸಿದರು. ಆಗ ಆ ಸಾಧಕರು ‘ಅವರ ಬಗ್ಗೆ ಮಾಹಿತಿ ತಿಳಿದಿಲ್ಲ’ ಎಂದರು. ಆ ಸಾಧಕರಿಗೆ ಅಧಿಕಾರಿಗಳು ಮುಂದಿನ ಪ್ರಶ್ನೆಗಳನ್ನು ಕೇಳಿದರು.)
ಅಧಿಕಾರಿ: ನೀವು ಗೋವಾಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೀರಾ?
ಸಾಧಕ: ಕೆಲವು ತಿಂಗಳ ಹಿಂದೆ ಹೋಗಿದ್ದೆನು. ಸರಿಯಾಗಿ ನೆನಪಿಲ್ಲ.
ಅಧಿಕಾರಿ: ಅಲ್ಲಿನ ಓರ್ವ ಸಾಧಕರನ್ನು ಭೇಟಿಯಾಗಿದ್ದಿರಾ?
ಸಾಧಕ: ಭೇಟಿಯೇನೂ ಆಗಿಲ್ಲ. ಎದುರು ಸಿಕ್ಕಿದಾಗ ನಮಸ್ಕಾರ ಹೇಳಿ ಸಹಜವಾಗಿ ಮಾತನಾಡಿದ್ದೇನೆ.
ಅಧಿಕಾರಿ: ಗುರುಪೂರ್ಣಿಮೆಯ ಸಮಯದಲ್ಲಿ ಅಲ್ಲಿಗೆ ಹೋಗಿದ್ದೀರಾ?
ಸಾಧಕ: ಇಲ್ಲ. ಇಲ್ಲಿಯೂ ಗುರುಪೂರ್ಣಿಮೆ ಇರುತ್ತದೆ. ಹಾಗಾಗಿ ಹೋಗಲು ಆಗುವುದಿಲ್ಲ.
ಅಧಿಕಾರಿ: (ಆಶ್ಚರ್ಯ ವ್ಯಕ್ತಪಡಿಸಿ) ಇಲ್ಲಿಯೂ ಆಚರಿಸುತ್ತೀರಾ?
ಸಾಧಕ: ಹೌದು. (ನಡುವೆ ಅವರಿಗೆ ಕಾಫಿ-ಚಹಾದ ಬಗ್ಗೆ ವಿಚಾರಿಸಲಾಯಿತು ಮತ್ತು ಊಟ ಮಾಡಿ ಹೋಗಲು ಹೇಳಲಾಯಿತು. ಮೊದಲು ಒಪ್ಪಿದರೂ ಕೊನೆಗೆ ಊಟ ಮಾಡಲಿಲ್ಲ.)
ಅಧಿಕಾರಿ: ನನ್ನ ದೂರವಾಣಿ ಸಂಖ್ಯೆ ನಿಮ್ಮ ಬಳಿ ಇದೆಯಲ್ಲ?
ಸಾಧಕ: ಹೌದು.
(ಅನಂತರ ಇನ್ನೋರ್ವ ಸಾಧಕರನ್ನು ವಿಚಾರಣೆಗಾಗಿ ಕರೆಸಲಾಯಿತು. ಅವರೊಂದಿಗೆ ಮುಂದಿನ ಸಂಭಾಷಣೆಗಳಾದವು.)
ಅಧಿಕಾರಿ: ನೀವು ಕಳೆದ ವರ್ಷ ನೀಡಿದ ‘ಬ್ಯಾಲೆನ್ಸ್ ಶೀಟ್’ನ ಮೂಲಪ್ರತಿ ಬೇಕಾಗಿತ್ತು. ಎಷ್ಟು ಸಮಯದೊಳಗೆ ಕೊಡಬಹುದು.
(ಸಾಧಕನು ಕೆಲವೇ ನಿಮಿಷಗಳಲ್ಲಿ ಅದನ್ನು ತಂದು ತೋರಿಸಿದನು. ಆ ಪ್ರತಿಯಲ್ಲಿ ಹಿಂದೆ ವಿಚಾರಿಸಿದ ಓರ್ವ ಸಾಧಕನ ಹೆಸರನ್ನು ನೋಡಿ ‘ಅವರ ಬಗ್ಗೆ ಮತ್ತೇನಾದರೂ ಕಾಗದಪತ್ರಗಳಿವೆಯೇ’ ಎಂದು ವಿಚಾರಿಸಿದರು. ಸಾಧಕನು ಇಷ್ಟೇ ಇರುವುದು ಎಂದರು.)
ಈ ರೀತಿ ರಾಷ್ಟ್ರ ಹಾಗೂ ಧರ್ಮ ಪ್ರೇಮಿಗಳ ವಿಚಾರಣೆ ಮಾಡಿದಂತೆ ಭಯೋತ್ಪಾದಕರ ವಿಚಾರಣೆ ಮಾಡಿದ್ದರೆ ಹಾಗೂ ಅವರ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾಗಿ ನಿಗಾ ಇಟ್ಟಿದ್ದರೆ ಭಾರತವು ಭಯೋತ್ಪಾದನೆ ಹಾಗೂ ನಕ್ಸಲ್‌ವಾದದಿಂದ ಎಂದೋ ಮುಕ್ತವಾಗಿರುತ್ತಿತ್ತು!
No comments:
Post a Comment