ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ...

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ ಉಪಚಾರಗಳಲ್ಲಿ ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು, ದೀಪವನ್ನು ಬೆಳಗುವುದು, ನೈವೇದ್ಯವನ್ನು ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ. (ಮುಂದುವರಿದ ಭಾಗ)

ನಾಲ್ಕನೆಯ ಉಪಚಾರ: ದೀಪವನ್ನು ಬೆಳಗುವುದು
ದೇವರಿಗೆ ಆತ್ಮಜ್ಯೋತಿಯಿಂದ ಮಾಡಿದ ಪೂಜೆಯೇ ನಿಜವಾದ ಪೂಜೆಯಾಗಿದೆ. ನಮಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಅದರ ದ್ಯೋತಕವೆಂದು ದೀಪವನ್ನು ಬೆಳಗಿ ದೇವರ ಪೂಜೆಯನ್ನು ಮಾಡಬೇಕು.
೧.ದೀಪವನ್ನು ಬೆಳಗುವುದರಿಂದಾಗುವ ಲಾಭಗಳು
ಅ.ದೀಪವನ್ನು ಬೆಳಗುವುದರಿಂದ ದೀಪದ ಜ್ಯೋತಿಯೆಡೆಗೆ ಆಕರ್ಷಿತವಾಗುವ ದೇವತೆಯ ಲಹರಿಗಳ (ತೇಜತತ್ತ್ವಕ್ಕೆ ಸಂಬಂಧಿಸಿದ) ಗತಿಮಾನ ಕವಚವು ಜೀವದ ಸುತ್ತಲೂ ನಿರ್ಮಾಣವಾಗುತ್ತದೆ. ಪೂಜೆಯ ನಂತರವೂ ಈ ಕವಚದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಜೀವಕ್ಕೆ ಲಾಭವಾಗುತ್ತದೆ.
ಆ.ದೀಪದಿಂದ ದೇವತೆಗೆ ಸಂಬಂಧಿಸಿದ ತೇಜತತ್ತ್ವದ ಲಹರಿಗಳು ಕಾರ್ಯನಿರತವಾಗುವುದರಿಂದ ಜೀವದ ಆತ್ಮಶಕ್ತಿಯು ಜಾಗೃತವಾಗುತ್ತದೆ. ಇದರಿಂದ ಕೆಲವೊಮ್ಮೆ ದೀಪವನ್ನು ಬೆಳಗುವಾಗ ಸಾಧಕರಿಗೆ ಆತ್ಮಸಾಕ್ಷಾತ್ಕಾರದ ಅನುಭೂತಿಯು ಬರುತ್ತದೆ.
೨.ದೇವತೆಗಳಿಗೆ ಮೊದಲು ಧೂಪ, ಆಮೇಲೆ ಊದುಬತ್ತಿ ಮತ್ತು ಕೊನೆಗೆ ದೀಪವನ್ನು ಏಕೆ ಬೆಳಗುತ್ತಾರೆ?
ಅ.ಧೂಪ: ಧೂಪದಿಂದ ಪ್ರಕ್ಷೇಪಿತವಾಗುವ ರಜೋಗುಣಿ ಹಾಗೂ ಪೃಥ್ವಿ ಮತ್ತು ಆಪ ತತ್ತ್ವಗಳಿಗೆ ಸಂಬಂಧಿಸಿದ ಲಹರಿಗಳಿಂದ ವಾಸ್ತುವಿನಲ್ಲಿರುವ ಕನಿಷ್ಠ ದೇವತೆಗಳ ಲಹರಿಗಳು ಕಾರ್ಯನಿರತವಾಗುತ್ತವೆ. ಮೊದಲು ಕನಿಷ್ಠ ದೇವತೆಗಳನ್ನು ಸಂತುಷ್ಟಗೊಳಿಸುವುದರಿಂದ ವಾಸ್ತುವಿನಲ್ಲಿರುವ ಕೆಟ್ಟ ಶಕ್ತಿಗಳ ಚಲನವಲನದ ಮೇಲೆ ನಿಯಂತ್ರಣವನ್ನಿಡಲು ಸಾಧ್ಯವಾಗುತ್ತದೆ.
ಆ.ಊದುಬತ್ತಿ: ಧೂಪದ ನಂತರ ಊದುಬತ್ತಿಯನ್ನು ಬೆಳಗುವುದರಿಂದ ಅದರ ಸುವಾಸನೆಯಿಂದ ಪ್ರಕ್ಷೇಪಿತವಾಗುವ ಪರಿಮಳದೆಡೆಗೆ ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ಸಗುಣ ಲಹರಿಗಳು ಆಕರ್ಷಿತವಾಗಲು ಸಹಾಯವಾಗುತ್ತದೆ.
ಇ.ದೀಪ: ಊದುಬತ್ತಿಯ ನಂತರ ದೀಪವನ್ನು ಬೆಳಗುವುದರಿಂದ ದೀಪದಿಂದ ಪ್ರಕ್ಷೇಪಿತವಾಗುವ ಸತ್ತ್ವಗುಣಿ ಮತ್ತು ತೇಜತತ್ತ್ವಕ್ಕೆ ಸಂಬಂಧಿಸಿದ ಲಹರಿಗಳಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಸೂಕ್ಷ್ಮ- ತತ್ತ್ವಗಳು ಕಾರ್ಯನಿರತವಾಗುವುದರಿಂದ ಜೀವಕ್ಕೆ ಅವಶ್ಯಕತೆಗನುಸಾರ ದೇವತೆಗಳ ಸಗುಣ ಮತ್ತು ನಿರ್ಗುಣ ಎರಡೂ ತತ್ತ್ವಗಳ ಲಾಭವು ಸಿಗುತ್ತದೆ.
೩.ದೇವತೆಗಳಿಗೆ ಊದುಬತ್ತಿಯಿಂದ ಅಥವಾ ನೀಲಾಂಜನದಿಂದ ಮೂರು ಬಾರಿ ಏಕೆ ಬೆಳಗಬೇಕು?: ದೇವತೆಗಳು ಅವಶ್ಯಕತೆಗನುಸಾರ ಈಶ್ವರನ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಈ ಮೂರೂ ಶಕ್ತಿಲಹರಿಗಳ ಬಲದ ಮೇಲೆ ಬ್ರಹ್ಮಾಂಡದಲ್ಲಿ ಕಾರ್ಯವನ್ನು ಮಾಡುತ್ತಿರುತ್ತಾರೆ. ದೇವತೆಗಳಿಗೆ ಮೂರು ಬಾರಿ ಬೆಳಗುವುದೆಂದರೆ ಈ ಮೂರೂ ಶಕ್ತಿಲಹರಿಗಳ ಪೂಜೆಯನ್ನು ಮಾಡಿ ದೇವತೆಗಳ ಹಿಂದೆ ಕಾರ್ಯನಿರತವಾಗಿರುವ ಈಶ್ವರನ ಶಕ್ತಿ ಸ್ರೋತದ ಉಪಾಸನೆಯನ್ನು ಮಾಡಿದಂತಾಗುತ್ತದೆ. ಮೂರು ಬಾರಿ ಬೆಳಗುವುದರಿಂದ ಬ್ರಹ್ಮಾಂಡದಲ್ಲಿನ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಲಹರಿಗಳು ಕಾರ್ಯನಿರತವಾಗುವುದರಿಂದ ಅನುಕ್ರಮವಾಗಿ ಜೀವದ ಮನಃ ಶಕ್ತಿ, ಆತ್ಮಶಕ್ತಿ ಮತ್ತು ಚಿತ್ತಶಕ್ತಿಯು ಜಾಗೃತವಾಗುತ್ತದೆ. ಈ ಮೂರು ಶಕ್ತಿಗಳ ಬಲ ದಿಂದ ಜೀವದ ಸ್ಥೂಲದೇಹ ಮತ್ತು ಸೂಕ್ಷ್ಮ ದೇಹಗಳು ಒಂದೇ ಸಮಯದಲ್ಲಿ ಶುದ್ಧವಾಗುತ್ತವೆ ಮತ್ತು ಇದರ ಪರಿಣಾಮವು ಶರೀರದ ಮೇಲೆ ದೀರ್ಘಕಾಲದವರೆಗೆ ಉಳಿಯುತ್ತದೆ. ಪ್ರತಿಯೊಂದು ಉಪಾಸನಾ ಕಾಂಡದ ಹಿಂದಿನ ಶಾಸ್ತ್ರವನ್ನರಿತುಕೊಂಡು ಆ ರೀತಿ ಭಾವವನ್ನಿಟ್ಟುಕೊಂಡು ಕೃತಿಗಳನ್ನು ಮಾಡಿದರೆ ನಮಗೆ ಸಾತ್ತ್ವಿಕತೆಯ ಲಾಭವು ಹೆಚ್ಚಿಗೆ ಸಿಗುತ್ತದೆ. ಇಚ್ಛೆ (ಮನಸ್ಸು), ಕ್ರಿಯೆ (ಬುದ್ಧಿ) ಮತ್ತು ಜ್ಞಾನ (ಚಿತ್ತ) ಈ ಲಹರಿಗಳ ಯೋಗ್ಯ ಸಮತೋಲನವನ್ನು ಜೋಪಾಸನೆ ಮಾಡಿದರೆ ಜೀವದ ಆಧ್ಯಾತ್ಮಿಕ ಉನ್ನತಿಯು ಬೇಗನೆ ಆಗುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೧.೧೨.೨೦೦೪, ಮಧ್ಯಾಹ್ನ ೪.೫೨ ಮತ್ತು ಸಾಯಂ. ೬.೨೧)

೪.ದೇವರಿಗೆ ದೀಪವನ್ನು ಬೆಳಗುವಾಗ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿಯೇ ಏಕೆ ಬೆಳಗಬೇಕು?: ದೇವರಿಗೆ ದೀಪವನ್ನು ಬೆಳಗುವಾಗ ದೇವರ ಬಲಪಾದದಿಂದ ಪ್ರಾರಂಭಿಸಿ ದೇವರ ಮುಖದ ತನಕ ತೆಗೆದುಕೊಂಡು ಹೋಗಿ ಅಲ್ಲಿಂದ ಎಡಪಾದದ ತನಕ, ಅಂದರೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರ ಪದ್ಧತಿಯಿಂದ ಬೆಳಗಬೇಕು. ಇದರಿಂದ ದೀಪವನ್ನು ಬೆಳಗುವವರ ಸೂರ್ಯ ನಾಡಿಯು ಜಾಗೃತವಾಗಿ ಸತ್ತ್ವಲಹರಿಗಳನ್ನು ಮತ್ತು ದೇವತೆಗಳಿಂದ ಪ್ರಕ್ಷೇಪಿತವಾಗುವ ಅತಿಸೂಕ್ಷ್ಮ ಲಹರಿಗಳನ್ನು ಗ್ರಹಿಸುವ ಅವರ ಸೂಕ್ಷ್ಮ ದೇಹಗಳ ಕ್ಷಮತೆಯು ಹೆಚ್ಚಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆ ಯವರ ಮಾಧ್ಯಮದಿಂದ, ೩೦.೧.೨೦೦೫)
೫.ದೀಪವನ್ನು ಬೆಳಗುವಾಗ ಗಂಟೆಯನ್ನು ಏಕೆ ಬಾರಿಸಬೇಕು?
ಅ.ಗಂಟೆಯು ಮಾರಕ ಕಾರ್ಯವನ್ನು ಮಾಡುವುದರಿಂದ ಗಂಟೆಯನ್ನು ಬಾರಿಸಿದ ನಂತರ ಕೇಳುವವರಲ್ಲಿ ಮಾರಕ ಭಾವವು ಜಾಗೃತವಾಗುತ್ತದೆ ಮತ್ತು ಅವರ ಶರೀರವು ರೋಮಾಂಚನಗೊಳ್ಳುತ್ತದೆ.
ಆ.ಗಂಟೆಯು ತನ್ನ ನಾದದಿಂದ ಮಾರಕಶಕ್ತಿಯನ್ನು ಪ್ರಕ್ಷೇಪಿಸುತ್ತದೆ. ಇದರಿಂದ ವಾತಾವರಣದಲ್ಲಿನ ರಜ-ತಮವು ಕಡಿಮೆಯಾಗಿ ಕೆಟ್ಟ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತದೆ. ಇದರಿಂದ ದೇವ ಕಾರ್ಯದಲ್ಲಿ ಕೆಟ್ಟ ಶಕ್ತಿಗಳ ಅಡಚಣೆಗಳುಂಟಾಗುವುದಿಲ್ಲ.
-ಈಶ್ವರ (ಕು.ಮಧುರಾ ಭೋಸಲೆ ಯವರ ಮಾಧ್ಯಮದಿಂದ, ೨೯.೪. ೨೦೦೪, ರಾತ್ರಿ ೮.೩೦)
(ದೀಪವನ್ನು ಬೆಳಗುವ ವಿಷಯದಲ್ಲಿನ ಹೆಚ್ಚಿನ ಮಾಹಿತಿಯನ್ನು ಸನಾತನವು ಪ್ರಕಾಶಿಸಿದ ‘ಆರತಿಯನ್ನು ಹೇಗೆ ಮಾಡಬೇಕು?’ ಎಂಬ ಕಿರುಗ್ರಂಥದಲ್ಲಿ ನೀಡಲಾಗಿದೆ.)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

No comments:

Post a Comment