ಕೇವಲ ಸಾಪ್ತಾಹಿಕ ‘ಸನಾತನ ಪ್ರಭಾತ’ದ ವಾಚನದಿಂದಲೇ ತಳಮಳದಿಂದ ಸಾಧನೆ ಹಾಗೂ ಉಪಾಯ ಮಾಡುವ ಬೆಂಗಳೂರಿನ ಸೌ. ಸರೋಜಾ ಪೈ
ಆಧ್ಯಾತ್ಮಿಕ ಸಾಧನೆಗೆ ದಾರಿದೀಪವಾದ ಸನಾತನ ಪ್ರಭಾತ
ಸನಾತನ ಪ್ರಭಾತ, ಇದೊಂದು ಕೇವಲ ಪತ್ರಿಕೆಯಾಗಿರದೇ ಸಾಧನೆಯ ಒಂದು ಮಾಧ್ಯಮವಾಗಿದೆ. ರಾಷ್ಟ್ರ ಹಾಗೂ ಧರ್ಮದ ಉದ್ಧಾರದ ಜೊತೆಗೆ ಸಮಸ್ತರ ಆಧ್ಯಾತ್ಮಿಕ ಸಾಧನೆಯಾಗಬೇಕು ಎಂಬ ಉದ್ದೇಶದಿಂದ ನಡೆಸಲಾಗುತ್ತಿದೆ. ಸನಾತನ ಪ್ರಭಾತದಿಂದ ಪ್ರೇರಣೆ ಪಡೆದು ಬೆಂಗಳೂರಿನ ಸೌ. ಸರೋಜ ಪದ್ಮನಾಭ ಪೈ ರವರು ಹೇಗೆ ಸಾಧನೆಯನ್ನು ಆರಂಭಿಸಿದರು ಹಾಗೂ ಆಗ ಅವರಿಗೆ ಬಂದ ಅನುಭೂತಿಗಳನ್ನು ಅವರದ್ದೇ ಮಾತಿನಲ್ಲಿ ಇಲ್ಲಿ ನೋಡೋಣ. ಇದರಿಂದ ಇತರ ವಾಚಕರೂ ಸ್ಫೂರ್ತಿ ಪಡೆಯಲಿ.
ಸನಾತನ ಪ್ರಭಾತದ ಪರಿಚಯವಾಗುವುದು: ಪ.ಪೂ.ಗುರುಗಳ ಕೃಪೆಯಿಂದ ನನಗೆ ಸನಾತನ ಪ್ರಭಾತದ ಪರಿಚಯವಾಯಿತು. ಡಿಸೆಂಬರ್ ೨೦೦೪ ರಲ್ಲಿ ನಮ್ಮ ಕುಲದೇವತೆಯ ದೇವಸ್ಥಾನಕ್ಕೆ ನನ್ನ ಕುಟುಂಬದವರು ಮತ್ತು ರಾಧಾಪಚ್ಚಿ (ಶ್ರೀಮತಿ ರಾಧಾ ಪ್ರಭು) ಯವರು ಗೋವಾಕ್ಕೆ ಹೊರಟಿದ್ದೆವು. ದಾರಿಯುದ್ದಕ್ಕೂ ರಾಧಾಪಚ್ಚಿಯವರು ಸನಾತನ ಪ್ರಭಾತ ಮತ್ತು ಸನಾತನ ಸಂಸ್ಥೆಯ ನಾಮಜಪದ ಬಗ್ಗೆ ಹೇಳುತ್ತಿದ್ದರು ಮತ್ತು ನಮ್ಮಿಂದ ನಾಮಜಪ ಮಾಡಿಸುತ್ತಿದ್ದರು. ಈ ವಯಸ್ಸಿನಲ್ಲಿ ರಾಧಾಪಚ್ಚಿಯವರಲ್ಲಿದ್ದ ತಳಮಳ ನೋಡಿ ಸನಾತನ ಸಂಸ್ಥೆಯಲ್ಲಿ ಏನೋ ವೈಶಿಷ್ಟ್ಯವಿದೆ ಎಂದೆನಿಸುತ್ತಿತ್ತು. ಮರುದಿನ ಬೆಳಗ್ಗೆ ನಾವು ಗೋವಾದಲ್ಲಿದ್ದ ನಮ್ಮ ಕುಲದೇವತೆಯ ದೇವಸ್ಥಾನಕ್ಕೆ ಭೇಟಿ ನೀಡಿ ಕುಲದೇವತೆಯ ದರ್ಶನ ಪಡೆದು ಅಲ್ಲಿದ್ದ ಒಂದು ಕೋಣೆಯಲ್ಲಿ ತಂಗಿದ್ದೆವು. ಅಲ್ಲಿಂದ ಹೊರಡುವಾಗ ರಾಧಾಪಚ್ಚಿಯವರು ನನಗೆ ಸನಾತನ ಪ್ರಭಾತದ ವಾರ್ಷಿಕ ಚಂದಾದ ಹಣವನ್ನು ಅವರೇ ಕಟ್ಟಿ ಉಡುಗೊರೆಯಾಗಿ ಕೊಟ್ಟರು. ಬರುವ ವರ್ಷದಿಂದ ನನಗೆ ಅದನ್ನು ನವೀಕರಿಸಬೇಕಾಗಿ ವಿನಂತಿಸಿದರು. ಪ.ಪೂ.ಡಾಕ್ಟರರ ಕೃಪೆಯಿಂದ ನಮ್ಮ ಮನೆಗೆ ಸನಾತನ ಪ್ರಭಾತ ಬರಲು ಪ್ರಾರಂಭವಾಯಿತು.
ಓದಲು ಆಸಕ್ತಿ ಮೂಡುವುದು: ಪ್ರಾರಂಭದಲ್ಲಿ ನನಗೆ ಅದನ್ನು ಓದುವ ಆಸಕ್ತಿ ಇರಲಿಲ್ಲ. ಆದರೂ ಸಮಯ ಸಿಕ್ಕಾಗ ನಾನು ನಿರಾಸಕ್ತಿಯಿಂದ ಓದುತ್ತಿದ್ದೆನು. ಹೀಗೆ ಒಂದು ವರ್ಷ ಕಳೆಯಿತು. ಒಂದು ದಿನ ನಾನು ಪತ್ರಿಕೆಯಲ್ಲಿ ಮಕರ ಸಂಕ್ರಮಣದ ಬಗ್ಗೆ ಓದಿದೆನು. ಇದ್ದಕ್ಕಿದ್ದಂತೆ ನನಗೆ ಆಸಕ್ತಿ ಹುಟ್ಟಲು ಪ್ರಾರಂಭವಾಯಿತು. ನಮ್ಮ ಮನೆ ಬಾಗಿಲಿಗೆ ಪ್ರತಿವಾರ ಈ ಪತ್ರಿಕೆ ನಮ್ಮ ಹಬ್ಬಗಳ ಬಗ್ಗೆ, ಅದನ್ನು ಆಚರಿಸುವ ಯೋಗ್ಯ ಪದ್ಧತಿ, ಅದರ ಹಿಂದಿನ ಶಾಸ್ತ್ರ, ಅದರಿಂದಾಗುವ ಲಾಭ ಹಾಗೂ ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದರೂ ನಾನು ಇಷ್ಟು ದಿನ ಆಸಕ್ತಿ ತೋರಿಸದೆ ಇರುವುದಕ್ಕಾಗಿ ನನಗೆ ನನ್ನ ಬಗ್ಗೆ ಸಿಟ್ಟು ಬಂದಿತು. ಇದರ ಲಾಭವನ್ನು ಪಡೆಯದಕ್ಕಾಗಿ ಬೇಸರವೂ ಆಯಿತು. ಅಲ್ಲಿಂದ ಪ್ರಾರಂಭವಾಯಿತು ಸನಾತನ ಪ್ರಭಾತವನ್ನು ಓದುವ ಆಸಕ್ತಿ.
ಸನಾತನ ಪ್ರಭಾತದಿಂದ ಸಾಧನೆಗೆ ದೊರೆತ ಸ್ಫೂರ್ತಿ: ಸನಾತನ ಪ್ರಭಾತವನ್ನು ಪ.ಪೂ.ಡಾಕ್ಟರರ ಕೃಪೆಯಿಂದ ಆಸಕ್ತಿಯಿಂದ ಓದಲು ಪ್ರಾರಂಭಿಸಿದ ಮೇಲೆ ಧರ್ಮದ ಬಗ್ಗೆ ಅನೇಕ ವಿಚಾರಗಳು ತಿಳಿಯಲಾರಂಭವಾಯಿತು. ವ್ಯಷ್ಟಿ ಸಾಧನೆ, ಸಮಷ್ಟಿ ಸಾಧನೆಯ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಸಂಸಾರದಲ್ಲಿ ಇದ್ದುಕ್ಕೊಂಡು ಸಾಧನೆಯನ್ನು ಹೇಗೆ ಮಾಡಬಹುದು ಎಂದೂ ಕಲಿಯಲು ಸಿಕ್ಕಿತು. ಧರ್ಮಕಾರ್ಯಕ್ಕಾಗಿ ತನು, ಮನ, ಧನದ ತ್ಯಾಗವನ್ನು ಹೇಗೆ ಮಾಡಬಹುದು ಮತ್ತು ಅದರಿಂದಾಗುವ ಆಧ್ಯಾತ್ಮಿಕ ಲಾಭದ ಬಗ್ಗೆ ಕಲಿಯಲು ಸಿಕ್ಕಿತು.
ಪ್ರತಿ ಪ್ರಸಂಗವನ್ನು ಸಾಧನೆಯೆಂದು ಹೇಗೆ ಮಾಡಬೇಕೆಂದು ಕಲಿಸಿದ ಸನಾತನ ಪ್ರಭಾತ : ಪ.ಪೂ. ಡಾಕ್ಟರರ ಕೃಪೆಯಿಂದ ಸನಾತನ ಪ್ರಭಾತವನ್ನು ಓದುವ ಆಸಕ್ತಿ ಹೆಚ್ಚಾಗತೊಡಗಿತು. ಹೆಚ್ಚಿನ ಆಸಕ್ತಿಯಿಂದ ಓದಿದಾಗ ನನಗೆ ಹಾಸಿಗೆ ಹಿಡಿದ ನನ್ನ ತಾಯಿಯ ಸೇವೆಯನ್ನೂ ಸಾಧನೆಯೆಂದು ಹೇಗೆ ಮಾಡಬೇಕು ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ದೊರಕಿತು. ಅವರಿಗೂ ನಾಮಜಪದ ಮಹತ್ವವನ್ನು ಹೇಳುತ್ತಿದ್ದೆನು. ಅವರೂ ನಾಮಜಪವನ್ನು ಮಾಡುತ್ತಿದ್ದರು ಮತ್ತು ಅವರ ಆರೈಕೆಯನ್ನು ಮಾಡುವ ನರ್ಸ್‌ಗಳಿಗೂ ಅವರು ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಹೇಳುತ್ತಿದ್ದರು. ಶ್ರೀಕೃಷ್ಣ ಪರಮಾತ್ಮನಲ್ಲಿ ಆತ್ಮನಿವೇದನೆಯನ್ನು ಮಾಡುತ್ತಿದ್ದರು. ಸನಾತನ ಪ್ರಭಾತದ ಮಾಧ್ಯಮದಿಂದ ಅವರಿಗೂ ಅವರ ಪ್ರಾರಬ್ಧವನ್ನು ನಾಮಜಪ ದೊಂದಿಗೆ ಭೋಗಿಸುವ ಶಕ್ತಿ ದೊರಕಿತು.
ಸನಾತನ ಪ್ರಭಾತದಿಂದ ಪ್ರತ್ಯಕ್ಷ ಸಾಧನೆ ಆರಂಭವಾಗಿ ಅನುಭೂತಿಗಳು ಬರುವುದು: ಸನಾತನ ಪ್ರಭಾತ ಪತ್ರಿಕೆ ಯಲ್ಲಿ ಬಂದಿರುವಂತಹ ಪ.ಪೂ.ಡಾಕ್ಟರರ ಮಾರ್ಗದರ್ಶನ ಮತ್ತು ಅನೇಕ ಸಾಧಕರ ಲೇಖನಗಳಿಂದಾಗಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಸ್ಫೂರ್ತಿ ಸಿಕ್ಕಿತು. ಹಿಂದೂ ಧರ್ಮವನ್ನು ಉಳಿಸಲು ಮತ್ತು ರಕ್ಷಿಸಲು ಹಾಗೂ ಈಶ್ವರೀ ರಾಜ್ಯವನ್ನು ತರಲು ಸನಾತನ ಸಂಸ್ಥೆಯ ಪ್ರಯತ್ನ ಮತ್ತು ಕಾರ್ಯವನ್ನು ಓದಿ ಭಾವಜಾಗೃತಿಯಾಗಲು ಪ್ರಾರಂಭವಾಯಿತು. ‘ಸಾಧಕರಿಗಾಗಿ ಉಪಾಯ’ ಇದರಲ್ಲಿ ಬರುವ ಆಧ್ಯಾತ್ಮಿಕ ಉಪಾಯಗಳನ್ನು ದಿನನಿತ್ಯ ಮಾಡಲು ಪ್ರಯತ್ನಿಸಿದೆನು. ಸನಾತನ ಪ್ರಭಾತದಲ್ಲಿ ತುಪ್ಪದ ದೀಪವನ್ನು ಹಚ್ಚಿ ದೀಪದ ಜ್ಯೋತಿ ಯನ್ನು ನೋಡಿ ೧೫-೨೦ನಿಮಿಷ ನಾಮಜಪವನ್ನು ಹೇಳುವ ಉಪಾಯವನ್ನು ಸೂಚಿಸಿದ್ದರು. ಅದೇ ರೀತಿ ನಾನು ಉಪಾಯವನ್ನು ಮಾಡುತ್ತಿದ್ದಾಗ ನನಗೆ ದೀಪದ ಜ್ಯೋತಿಯಲ್ಲಿ ಪ.ಪೂ.ಭಕ್ತರಾಜ ಮಹಾರಾಜರು ಮತ್ತು ಪ.ಪೂ.ಡಾಕ್ಟರರು ಕಾಣಿಸಿಕೊಳ್ಳ್ಳುತ್ತಿದ್ದರು. ಪ.ಪೂ.ಡಾಕ್ಟರರು ದೀಪದ ಜ್ಯೋತಿಯಲ್ಲಿಯಾದರೂ ನನಗೆ ನೋಡಲು ಸಿಗುತ್ತಾರೆಂದು ಆ ಉಪಾಯವನ್ನು ಪ್ರತಿದಿನ ತಪ್ಪದೆ ಮಾಡುತ್ತಿದ್ದೆನು. ಅಕಸ್ಮತ್ತಾಗಿ ಒಂದು ದಿನ ನೋಡಲು ಸಿಗದಿದ್ದರೆ ನನ್ನಲ್ಲಿ ಭಾವ ಮತ್ತು ತಳಮಳ ಕಡಿಮೆಯಿದೆ ಎಂದು ಅನಿಸುತ್ತಿತ್ತು. ಹೀಗೆ ಸನಾತನ ಪ್ರಭಾತ ನನ್ನ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆಗೆ ದಾರಿದೀಪವಾಗಲು ಪ್ರಾರಂಭವಾಯಿತು.
ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗೆ ಪ್ರಯತ್ನಗಳಾಗುವುದು: ಪ.ಪೂ.ಡಾಕ್ಟರರ ಕೃಪೆಯಿಂದ ಸನಾತನ ಪ್ರಭಾತ ಪತ್ರಿಕೆಯನ್ನು ಓದುವ ಆಸಕ್ತಿ ಮುಂದುವರಿಯುತ್ತಾ ಹೋಯಿತು. ಪತ್ರಿಕೆ ಬರಲು ಒಂದು ದಿನ ತಡವಾದರೂ ಮನಸ್ಸಿಗೆ ಸಂಕಟವಾಗುತ್ತಿತ್ತು. ಆಗ ಸಾಧಕರಿಂದ ಪತ್ರಿಕೆ ತೆಗೆದುಕೊಂಡು ಬರುತ್ತಿದ್ದೆನು. ಅವರು ನನಗಾಗಿ ಪತ್ರಿಕೆ ತೆಗೆದಿಡುತ್ತಿದ್ದರು. ಸನಾತನ ಪ್ರಭಾತ ಪತ್ರಿಕೆಯಲ್ಲಿ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಬಗ್ಗೆ ಓದಿದಾಗ ನನ್ನಲ್ಲಿದ್ದ ಅಹಂ ಮತ್ತು ಸ್ವಭಾವದೋಷಗಳು ನನ್ನ ಗಮನಕ್ಕೆ ಬರಲು ಪ್ರಾರಂಭವಾಯಿತು. ನನ್ನ ಪ್ರತಿಯೊಂದು ಕೃತಿಯಲ್ಲಿ ನನ್ನ ಸ್ವಭಾವದೋಷ ಮತ್ತು ಅಹಂನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೆನು. ನಾನು ನನ್ನ ಸ್ವಭಾವದೋಷ ಮತ್ತು ಅಹಂನ್ನು ಕಡಿಮೆ ಮಾಡದಿದ್ದರೆ ನನಗೆ ಹಾಸಿಗೆ ಹಿಡಿದ ನನ್ನ ತಾಯಿಯ ಆರೈಕೆಯನ್ನು ಚೆನ್ನಾಗಿ ಮಾಡಲು ಆಗುವುದಿಲ್ಲ ಎಂಬ ವಿಚಾರ ಗಮನಕ್ಕೆ ಬರಲು ಪ್ರಾರಂಭವಾಯಿತು. ಸಾಧನೆಯ ದೃಷ್ಟಿಯಿಂದ ನಾನು ಅವರ ಆರೈಕೆಯನ್ನು ಮಾಡುತ್ತಿರುವುದರಿಂದ ನನ್ನ ಸ್ವಭಾವದೋಷ ಮತ್ತು ಅಹಂ ಕಡಿಮೆಯಾಗಲು ಪ್ರಾರಂಭವಾಯಿತು.
ಸನಾತನ ಪ್ರಭಾತದ ಮೇಲೆ ನಿರ್ಬಂಧ ಬಂದರೆ ಅದು ಸಿಗದಿರುವುದರಿಂದ ಪರಿಪರಿಯಾಗಿ ನಿರ್ಬಂಧ ಬರದಂತೆ ದೇವರಿಗೆ ಮೊರೆ ಹೋಗುವುದು: ನಾನು ಸನಾತನ ಪ್ರಭಾತದಲ್ಲಿ ಸನಾತನ ಪ್ರಭಾತದ ಮೇಲೆ ನಿರ್ಬಂಧ ಬಂದರೆ ಹಿಂದೂಗಳಿಗಾಗುವ ಹಾನಿಯ ಕುರಿತು ಶ್ರೀ.ಪ್ರಶಾಂತ ಹರಿಹರರವರ ಲೇಖನವನ್ನು ಓದಿದೆನು. ಅದನ್ನು ಓದಿ ನನಗೆ ಭಾವಜಾಗೃತಿಯಾಗಿ ಪ.ಪೂ.ಡಾಕ್ಟರರ ಮತ್ತು ಶ್ರೀಕೃಷ್ಣ ಪರಮಾತ್ಮನ ಚರಣಗಳಲ್ಲಿ ಶರಣಾಗತಳಾಗಿ ಬೇಡಿಕೊಂಡೆನು. ‘ಹೇ ಗುರುದೇವ, ಹೇ ಶ್ರೀಕೃಷ್ಣ ಪರಮಾತ್ಮಾ, ಸನಾತನ ಸಂಸ್ಥೆ ಮೇಲೆ ನಿರ್ಬಂಧ ಬಂದರೆ ನಮಗೆ ಸನಾತನ ಪ್ರಭಾತ ಪತ್ರಿಕೆ ಬರುವುದು ನಿಂತು ಹೋಗುತ್ತದೆ. ಆಗ ನಮ್ಮಂತಹ ಎಷ್ಟೋ ಧರ್ಮಾಭಿಮಾನಿಗಳಿಗೆ ಧರ್ಮಾಚರಣೆ ಬಗ್ಗೆ ಮಾಹಿತಿ ಸಿಗುವುದಿಲ್ಲ, ಕಾಲಾನುಸಾರ ಸಾಧನೆ ಮಾಡಲು ಮಾರ್ಗದರ್ಶನ ಸಿಗುವುದಿಲ್ಲ. ಇದರಿಂದ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ. ಎಲ್ಲಿ ಹೋದರೂ ಅರಾಜಕತೆ, ಅನ್ಯಾಯ, ಮೋಸ, ವಂಚನೆ ತುಂಬಿರುವ ಈ ಜಗತ್ತಿನಲ್ಲಿ ನಮಗೆ ಸನಾತನ ಪ್ರಭಾತ ಪತ್ರಿಕೆ ಧೈರ್ಯ ತುಂಬಿಸಿ ಸಾಧನೆ ಮಾಡಲು ಪ್ರೇರಣೆ ಕೊಡುತ್ತಿತ್ತು. ನೀನೇ ಸೃಷ್ಟಿಸಿರುವ ಈ ಜಗತ್ತಿನಲ್ಲಿ ಹಾಗೂ ನಿನ್ನ ಕೃಪೆಯಿಂದಲೇ ಹುಟ್ಟಿರುವ ನಮ್ಮಂತಹ ಧರ್ಮಾಭಿಮಾನಿಗಳಿಗೆ ಸನಾತನ ಪ್ರಭಾತ ಪತ್ರಿಕೆ ಇಲ್ಲದೇ ವಂಚಿತರಾಗಲು ಬಿಡಬೇಡಿ. ನಮ್ಮ ಮೇಲೆ ನಿಮ್ಮ ಕೃಪೆ ಸದಾಕಾಲ ಇರಲಿ ಹಾಗೂ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಬಾರದ ಹಾಗೆ ರಕ್ಷಿಸು ಹಾಗೂ ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳಿ’ ಎಂದು ಸತತವಾಗಿ ಪ್ರಾರ್ಥನೆಯಿಂದ ಶ್ರೀಕೃಷ್ಣ ಪರಮಾತ್ಮನ ಚರಣಗಳಲ್ಲಿ ಶರಣಾಗತಭಾವದಿಂದ ಹೇಳುತ್ತಿದ್ದೆನು.
ಈ ಲೇಖನವನ್ನು ರಾಧಾಪಚ್ಚಿಯ ವರಿಗೆ ಓದಿ ಹೇಳುವಾಗ ಸಂಚಾರೀ ವಾಣಿಯಲ್ಲಿ ವ್ಯತ್ಯಯವುಂಟಾಗುವುದು: ಈ ಲೇಖನವನ್ನು ರಾಧಾ ಪಚ್ಚಿಯವರಿಗೆ ಓದಿ ಹೇಳುವಾಗ ಸಂಚಾರಿವಾಣಿಯು ನಿಂತು ಹೋಗುತ್ತಿತ್ತು. ಮೂರು ನಾಲ್ಕು ಬಾರಿ ಹಾಗೆಯೇ ಆಯಿತು. ಆದರೂ ಬಿಡದೆ ಈ ಲೇಖನವನ್ನು ಅವರಿಗೆ ಓದಿ ಹೇಳಿದೆ.
ಲೇಖನ ಬರೆಯುವಾಗ ಬಂದ ಅನುಭೂತಿ: ಈ ಲೇಖನವನ್ನು ಬರೆಯುವ ದಿನ ನನಗೆ ಒಂದು ಅನುಭೂತಿ ಬಂದಿತು. ನಾನು ಸ್ನಾನ ಮಾಡುತ್ತಿರುವಾಗ ಶ್ರೀಕೃಷ್ಣ ಪರಮಾತ್ಮನ ಜಪ ಮಾಡುತ್ತಿದ್ದೆನು. ಆ ಸಮಯದಲ್ಲಿ ನಾನು ಪ.ಪೂ. ಡಾಕ್ಟರರಿಗೆ, ‘ಹೇ ಗುರುದೇವಾ, ನನ್ನನ್ನು ನೀವು ಮಾಧ್ಯಮವಾಗಿ ಇರಿಸಿಕೊಂಡು ನನ್ನಿಂದ ಯಾವಾಗಲೂ ನಿಮಗೆ ಅಪೇಕ್ಷಿತ ರೀತಿಯಲ್ಲಿ ಸಾಧನೆಯನ್ನು ಮಾಡಿಸಿಕೊಳ್ಳಿ. ಈ ಮುಖಾಂತರವಾದರೂ ನನಗೆ ನಿಮ್ಮ ಚರಣವನ್ನು ಸೇರುವ ಅವಕಾಶ ಸಿಗಲಿ’ ಎಂದು ಪ್ರಾರ್ಥಿಸುತ್ತಿದ್ದಾಗ ಈ ಲೇಖನವನ್ನು ಬರೆ ಯುವ ಬಗ್ಗೆ ಸಂಚಾರೀವಾಣಿ ಕರೆ ಬಂದಿತು.
ಇಂತಹ ಒಳ್ಳೆಯ ಅನುಭೂತಿಯನ್ನು ಕೊಟ್ಟು ನನ್ನನ್ನು ಮಾಧ್ಯಮವಾಗಿರಿಸಿಕೊಂಡು ನನ್ನಿಂದ ಲೇಖನವನ್ನು ಬರೆಯಿಸಿಕೊಂಡ ಪ.ಪೂ.ಡಾಕ್ಟರರಿಗೆ ಮತ್ತು ಶ್ರೀಕೃಷ್ಣ ಪರಮಾತ್ಮನ ಚರಣಗಳಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಅದು ಕಡಿಮೆಯೇ ಆಗಿದೆ. ‘ಹೇ ಗುರುದೇವ’, ‘ಹೇ ಶ್ರೀಕೃಷ್ಣ ಪರಮಾತ್ಮಾ’ ನನಗೆ ಇಂತಹ ಒಂದು ಅವಕಾಶವನ್ನು ಕೊಟ್ಟು ನನ್ನನ್ನು ಮಾಧ್ಯಮವಾಗಿ ಮಾಡಿಸಿ ಕೊಂಡಿದ್ದಕ್ಕೆ ನಿಮ್ಮ ಚರಣಗಳಲ್ಲಿ ಅನಂತ ಅನಂತ ಕೋಟಿ ಕೃತಜ್ಞತೆಯನ್ನು ಅರ್ಪಿಸುತ್ತೇನೆ. -ಸೌ.ಸರೋಜಾ ಪದ್ಮನಾಭ ಪೈ, ಬೆಂಗಳೂರು.
No comments:
Post a Comment